ಫಾರ್ಮುಲಾ ಒನ್ - ೭೫ರ ಸಡಗರ ಸಂಭ್ರಮ
೨೦೨೫ನೇ ವರ್ಷದ ಫಾರ್ಮುಲಾ ಒನ್ ಋತುವಿನ ಉದ್ಘಾಟನಾ ಸಮಾರಂಭ.
ಫಾರ್ಮುಲಾ ೧ ಇತಿಹಾಸದಲ್ಲಿ ಇದೆ ಮೊಟ್ಟಮೊದಲ ಬಾರಿಗೆ ಎಫ್೧ ಕಾರುಗಳ ಅನಾವರಣ ಒಟ್ಟಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಹತ್ತು ತಂಡಗಳು, ತಮ್ಮ ಚಾಲಕರು ಮತ್ತು ಟೀಮ್ ನಿರ್ವಾಹಕರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಇದ್ದಾರೆ. ಇಲ್ಲಿ ೨೦೨೫ರ ಕಾರಿನ ಬಣ್ಣಗಳು, ಮತ್ತು ಅವರ ತಂಡದ ಉಡುಗೆ ತೊಡುಗೆಗಳು ಅಧಿಕೃತವಾಗಿ ಅನಾವರಣಗೊಳ್ಳುತ್ತದೆ. ಈ ಮೂಲಕ ಎಫ್೧ನ ೭೫ನೇ ಋತು ವಿಶೇಷವಾಗಿ ಆರಂಭವಾಗಲಿದೆ!
ಈ ಕಾರ್ಯಕ್ರಮ ಎಲ್ಲಿ ಯಾವಾಗ ನಡೆಯುತ್ತಿದೆ?
ಈ ಕಾರ್ಯಕ್ರಮವು ಲಂಡನ್ನಿನ "ದ ಓ೨ ಅರೇನಾ" ಅಲ್ಲಿ ೧೮ನೆಯ ಫೆಬ್ರವರಿ ೨೦೨೫ರಂದು ಜಿಎಂಟಿ ಕಾಲಮಾನ ಇರುಳಿನ ಹೊತ್ತು ೮ ಗಂಟೆಗೆ (ಭಾರತೀಯ ಕಾಲಮಾನ: ೧೯ನೆಯ ಫೆಬ್ರವರಿ, ಮಧ್ಯ ರಾತ್ರಿ ೧.೩೦ ಗಂಟೆ) ನಡೆಯಲಿದೆ.
ಈ ಕಾರ್ಯಕ್ರಮವನ್ನು ಎಲ್ಲಿ ನೋಡಬಹುದು?
ಎಫ್೧ ಅಭಿಮಾನಿಗಳು ಈ ಕಾರ್ಯಕ್ರಮವನ್ನು, ದ ಓ೨ ಅರೇನಾ ಅಲ್ಲಿ ಲೈವ್ ಆಗಿ, ಎಫ್೧ ಪ್ರೊ ಮತ್ತು ಎಫ್೧ ಅವರ ಅಧಿಕೃತ ಯೂಟ್ಯೂಬ್ ವಾಹಿನಿಯಲ್ಲಿ ನೇರಪ್ರಸಾರವನ್ನು ನೋಡಬಹುದು.
ಈ ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು?
೧. ಈ ಸಂದರ್ಭದಲ್ಲಿ ಎಫ್೧ ತಂಡದ ಎಲ್ಲಾ ಚಾಲಕರು, ಟೀಮ್ ನಿರ್ವಾಹಕರು ಮತ್ತು ಪ್ರಪಂಚದ ಖ್ಯಾತ ಸೆಲೆಬ್ರಿಟಿಗಳ ಕೆಂಪು ಹಾಸಿನ ಮೇಲಿನ ನಡಿಗೆ.
೨. ೨೦೨೫ರಲ್ಲಿ ಜಿದ್ದಾಜಿದ್ದಿಗೆ ಇಳಿಯುವ ಎಫ್೧ ರೇಸ್ ಕಾರುಗಳ ಬಣ್ಣದ ಅನಾವರಣ.
೩. ಎಫ್೧ ಇತಿಹಾಸದಲ್ಲೇ ಅತ್ಯುತ್ತಮ ಚಾಲಕರಲ್ಲಿ ಒಬ್ಬರಾದ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಮೊತ್ತ ಮೊದಲ ಬಾರಿಗೆ ಅಭಿಮಾನಿಗಳು ಫೆರಾರಿ ತಂಡದ ಜೊತೆ ಅಧಿಕೃತವಾಗಿ ನೋಡುವ ಅವಕಾಶ.
೪. ಕಿಮಿ ಆಂಟೋನೆಲ್ಲಿ (ಮರ್ಸಿಡಿಸ್), ಇಸಾಕ್ ಹಡ್ಜರ್(ರೇಸಿಂಗ್ ಬುಲ್ಸ್), ಗ್ಯಾಬ್ರಿಯೆಲ್ ಬೋರ್ಟೊಲೆಟೋ(ಸೌಬರ್), ಆಲೀ ಬೇರ್ಮನ್(ಹಾಸ್), ಜಾಕ್ ದೂಹಾನ್(ಅಲ್ಪೀನ್) ಲಿಯಾಂ ಲಾಸನ್ (ರೆಡ್ಬುಲ್) ರೀತಿಯ ಹೊಸ ಪ್ರತಿಭೆಗಳು (ರೂಕೀಗಳು) ಮೊತ್ತ ಮೊದಲ ಬಾರಿಗೆ ತಮ್ಮ ಪೂರ್ಣ ಫಾರ್ಮುಲಾ ೧ ಋತುವನ್ನು ಆರಂಭಿಸುತ್ತಿರುವುದು.
೫. ಹತ್ತು ಹಲವು ವಿಶೇಷವಾದ ಮನೋರಂಜನಾ ಕಾರ್ಯಕ್ರಮಗಳು.
