ಫಾರ್ಮುಲಾ ೧ - ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀ ೨೦೨೫

೨೦೨೫ನೇ ಸಾಲಿನ ಎಫ್ ೧ ಮೊದಲ ರೇಸಿನ ಕುರಿತ ವಿಮರ್ಶೆ

ಮೇಟಿಕುರ್ಕೆ

3/20/20251 ನಿಮಿಷ ಓದಿ

ಫೆಬ್ರವರಿಯ ಕಡೆಯ ವಾರದಲ್ಲಿ ನಡೆದ ವಿಂಟರ್ ಟೆಸ್ಟಿಂಗ್ ನಂತರ ಯಾವೆಲ್ಲ ಕಾರುಗಳು ಹೇಗೆ ಕೆಲಸ ಮಾಡುತ್ತಿದೆ, ಯಾರು ತಮ್ಮ ಕಾರನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೆ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀಯಲ್ಲಿ ಕಡೆಗೂ ಉತ್ತರ ಸಿಕ್ಕಿತು. ಅದೇನೆಂದರೆ ಈ ವರ್ಷದ ಅತ್ಯುತ್ತಮ ತಂಡ ಯಾವುದು ಎಂದರೆ ಅದು ಮೆಕ್ಲಾರೆನ್ ತಂಡ. ಹಾಗಾದರೆ ವರ್ಷದ ಮೊದಲ ರೇಸ್ ಹೇಗಿತ್ತು? ಈ ಕುರಿತು ನನ್ನ ಕಡೆಯಿಂದ ಸಂಕ್ಷಿಪ್ತ ವರದಿ.

ಅರ್ಹಾತಾ ಸುತ್ತು (ಕ್ವಾಲಿಫೈಯಿಂಗ್ ರೌಂಡ್):

ಎಲ್ಲರ ನಿರೀಕ್ಷೆಯಂತೆ ಮೆಕ್ಲಾರೆನ್ ತಂಡದ ಚಾಲಕರಾದ ಲ್ಯಾಂಡೋ ನೋರಿಸ್ ಮತ್ತು ಆಸ್ಕರ್ ಪಿಯಾಸ್ಟ್ರಿ ಮೊದಲ ಸಾಲನ್ನು ಆಕ್ರಮಿಸಿಕೊಂಡರೆ, ಅದ್ಭುತ ಕ್ವಾಲಿಫೈಯಿಂಗ್ ಪ್ರದರ್ಶನದ ಮೂಲಕ ಈಗಿನ ವಿಶ್ವ ಚಾಂಪಿಯನ್ ಮ್ಯಾಕ್ಸ್ ವೆರ್ಸ್ಟಪ್ಪನ್ ಮೂರನೇ ಸ್ಥಾನವನ್ನು ಪಡೆದುಕೊಂಡರು. ಮ್ಯಾಕ್ಸ್ ಅವರ ಸಹಚಾಲಕ, ಸೆರ್ಗಿಯೊ ಪೆರೇಜ್ ಸ್ಥಾನಕ್ಕೆ ಬಂದಿದ್ದ ಲಿಯಾಮ್ ಲಾಸನ್ ಅವರು ೧೭ನೆಯ ಸ್ಥಾನ ಪಡೆದು ರೆಡ್ಬುಲ್ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಮೆರ್ಸೆಡಿಸ್ ನ ಜಾರ್ಜ್ ರಸೆಲ್ ಅವರು ೪ನೆಯ ಸ್ಥಾನವನ್ನು ಪಡೆದರೆ, ಅವರ ರೂಕೀ ಟೀಮ್ ಮೇಟ್ ಕಿಮಿ ಆಂಟೋನೆಲ್ಲಿ ೧೬ನೇ ಸ್ಥಾನ ಗಳಿಸಿದರು. ಇನ್ನು ಎಲ್ಲರ ಹುಬ್ಬೇರುವಂತಹ ಪ್ರದರ್ಶನ ತೋರಿದ ಯೂಕಿ ತ್ಸುನೋಡ ೫ನೆಯ ಸ್ಥಾನವನ್ನು ಪಡೆದರೆ ಅವರ ರೂಕೀ ಸಹಚಾಲಕ ಇಸಾಕ್ ಹಡ್ಜರ್ ಅವರು ೧೧ನೇ ಸ್ಥಾನ ಪಡೆದು ಗಮನ ಸೆಳೆದರು. ಇನ್ನು ಟೆಸ್ಟಿಂಗ್ ಸಮಯದಲ್ಲಿ ಬಹಳಷ್ಟು ಭರವಸೆ ಮೂಡಿಸಿದ್ದ ವಿಲಿಯಮ್ಸ್ ತಂಡದ ಚಾಲಕರಾದ ಅಲೆಕ್ಸ್ ಆಲ್ಬನ್ ಮತ್ತು ಕಾರ್ಲೋಸ್ ಸೈನ್ಜ್ ಕ್ರಮವಾಗಿ ೬ ಮತ್ತು ೧೦ನೆಯ ಸ್ಥಾನವನ್ನು ಪಡೆದರೆ ಫೆರಾರಿಯ ಚಾಲಕರಾದ ಶಾರ್ಲ್ಸ್ ಲೆಕ್ಲೇರ್ಕ್ ಮತ್ತು ಏಳು ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರು ಕ್ರಮವಾಗಿ ೭ ಮತ್ತು ೮ನೆಯ ಸ್ಥಾನವನ್ನು ಪಡೆದದ್ದು ಟೈಫೋಸಿಗಳಿಗೆ ಬೇಸರವನ್ನುಂಟುಮಾಡಿತು. ಅಚ್ಚರಿಯ ಕ್ವಾಲಿಫೈಯಿಂಗ್ ಪ್ರದರ್ಶನ ನೀಡಿದ ಪಿಯರ್ ಗ್ಯಾಸ್ಲಿ ಅವರು ೯ನೇ ಸ್ಥಾನವನ್ನು ಪಡೆಯುವ ಮೂಲಕ ರೆನೋ ತಂಡವನ್ನು ಮೊದಲ ಹತ್ತು ಸ್ಥಾನದಲ್ಲಿ ಕ್ವಾಲಿಫೈ ಮಾಡಿಸಿದರು. ಇನ್ನು ಮೊದಲ ೧೦ ಸ್ಥಾನದಲ್ಲಿ ಒಂದೇ ಒಂದು ಕಾರೂ ಬಾರದೆ ಆಸ್ಟನ್ ಮಾರ್ಟಿನ್ ತಂಡವು ನಿರಾಸೆ ಮೂಡಿಸಿದರೆ, ಹಾಸ್ ಮತ್ತು ಸೌಬರ್ ತಂಡದ ಕಾರುಗಳು ಮೊದಲ ಹತ್ತರಿಂದ ಹೊರಗುಳಿದದ್ದು ಅಂತಹ ಅಚ್ಚರಿಯನ್ನೇನು ಉಂಟು ಮಾಡಲಿಲ್ಲ. ಇವೆಲ್ಲದರ ನಡುವೆ ತಮ್ಮ ಮೊಟ್ಟಮೊದಲ ಫಾರ್ಮುಲಾ ಒನ್ ಓಟದಲ್ಲಿ ಎರಡನೇ ಸುತ್ತಿನ ಕ್ವಾಲಿಫೈಯಿಂಗ್ ಗೆ ಬರುವುದಲ್ಲದೆ ತಮ್ಮ ಅನುಭವಿ ಸಹ ಚಾಲಕರಾದ ನಿಕೊ ಹ್ಯೂಲ್ಕನ್ಬೆರ್ಗ್ ಅವರನ್ನು ಹಿಂದಿಕ್ಕಿದ ಗ್ಯಾಬ್ರಿಯೆಲ್ ಬೋರ್ಟೊಲೆಟೋ ಎಲ್ಲರ ಗಮನವನ್ನು ಸೆಳೆದರು.

ಓಟ (ರೇಸ್)

ಎಲ್ಲಾ ಎಫ್ ಒನ್ ಅಭಿಮಾನಿಗಳೂ ನಿರೀಕ್ಷಿಸುತ್ತಿದ್ದ ಕ್ಷಣ ಇನ್ನೇನು ಹತ್ತಿರ ಬಂದಾಗ, ಮಳೆ ಬೀಳಲು ಆರಂಭವಾಗಿದ್ದು ಎಫ್ ಒನ್ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಓಟದ ಆರಂಭಕ್ಕೆ ಮೊದಲು ನಡೆಯುವ ಫಾರ್ಮೇಶನ್ ಲ್ಯಾಪ್ ಅಲ್ಲಿ ಮಳೆಯ ಕಾರಣ ಕಾರಿನ ನಿಯಂತ್ರಣವನ್ನು ತಪ್ಪಿಸಿಕೊಂಡು ಇಸಾಕ್ ಹಡ್ಜರ್ ಅವರು ಹೊರಬಿದ್ದ ಕಾರಣ ರೇಸಿನ ಆರಂಭವು ೧೫ ನಿಮಿಷಗಳ ಕಾಲ ಮುಂದಕ್ಕೆ ಹೋಯಿತು.

ಮತ್ತೆ ಎಲ್ಲವೂ ಸರಿಹೋಯಿತು ಎಂದುಕೊಳ್ಳುವಷ್ಟರಲ್ಲಿ , ರೇಸ್ ಆರಂಭವಾಗಿ ಕೆಲವೇ ಕೆಲವು ತಿರುವುಗಳೊಳಗೆ, ಮತ್ತೊಬ್ಬ ರೂಕಿ ಚಾಲಕ ಜಾಕ್ ದೂಹನ್ ತಮ್ಮ ಕಾರನ್ನು ಗೋಡೆಗೆ ಗುದ್ದಿಸಿಕೊಂಡು ಸೇಫ್ಟಿ ಕಾರ್ ಬರಲು ಕಾರಣರಾದರೆ, ಸೇಫ್ಟಿ ಕಾರಿನ ಹಿಂದೆ ಅನುಭವಿ ಚಾಲಕ ಕಾರ್ಲೋಸ್ ಸೈನ್ಜ್ ಅವರು ತಮ್ಮ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ರೇಸಿನಿಂದ ಹೊರಬಿದ್ದು ವಿಲಿಯಮ್ಸ್ ತಂಡಕ್ಕೆ ನಿರಾಶೆಯನ್ನು ಮೂಡಿಸಿದರು.

ಇಷ್ಟೆಲ್ಲದರ ನಡುವೆ ರೇಸ್ನ ಆರಂಭದಲ್ಲಿ ನೋರಿಸ್ ಅವರು ತಮ್ಮ ಮೊದಲ ಸ್ಥಾನವನ್ನು ಕಾಯ್ದುಕೊಂಡರೆ, ಎರಡನೆಯ ತಿರುವಿನಲ್ಲಿ ಆಸ್ಕರ್ ಪಿಯಾಸ್ಟ್ರಿ ಅವರನ್ನು ಮ್ಯಾಕ್ಸ್ ವೆರ್ಸ್ಟಪ್ಪನ್ ಅದ್ಭುತವಾಗಿ ಹಿಂದಿಕ್ಕೆ ನೋರಿಸ್ ಅವರ ಮೇಲೆ ಚೆನ್ನಾಗಿ ಒತ್ತಡವನ್ನು ಹೇರುತ್ತಾ ಸಾಗಿದರೂ, ಅತಿಯಾದ ಟೈಯರ್ ಬಳಕೆ ಅವರ ಇಂಟರ್ಸ್ ಟೈರನ್ನು ಸವೆಸಿದ ಕಾರಣ, ಪಿಯಾಸ್ಟ್ರಿ ವೆರ್ಸ್ಟಪ್ಪನ್ ಅವರನ್ನು ಹಿಂದಿಕ್ಕೆ ಎರಡನೇ ಸ್ಥಾನವನ್ನು ಮರಳಿ ಪಡೆದರು.

ಉಳಿದಂತೆ ಯಾವುದೇ ಬದಲಾವಣೆ ಇಲ್ಲದೆ ನಡೆಯುತ್ತಿದ್ದ ಓಟದಲ್ಲಿ, ಮಳೆ ನಿಂತು ಟ್ರ್ಯಾಕ್ ಕೂಡ ಒಣಗುತ್ತಾ ಸಾಗಿತ್ತು. ಇನ್ನೇನು ಎಲ್ಲವೂ ಮರಳಿ ಮಾಮೂಲಿ ರೇಸಿನಂತಾಗುತ್ತದೆ ಎನ್ನುವಷ್ಟರಲ್ಲಿ ಅನುಭವಿ ಚಾಲಕ ಅಲೋನ್ಸೋ ಅವರು ೩೪ನೆಯ ಲ್ಯಾಪಿನ ೬ನೇ ತಿರುವಿನಲ್ಲಿ ತಮ್ಮ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ರೇಸಿನಿಂದ ಹೊರಬಿದ್ದು ಮತ್ತೊಮ್ಮೆ ಸೇಫ್ಟಿ ಕಾರ್ ಬರಲು ಕಾರಣರಾದರು. ಇದರ ಉಪಯೋಗವನ್ನು ಪಡೆದ ಎಲ್ಲಾ ತಂಡ ಹಾಗೂ ಚಾಲಕರು ಸ್ಲಿಕ್ ಟೈರ್ ಅಂದರೆ "ಒಣ ವಾತಾವರಣದ ಗಾಲಿ"ಗೆ ತಮ್ಮ ಚಕ್ರಗಳನ್ನು ಬದಲಾಯಿಸಿಕೊಂಡರು. ಇದಾಗಿ ರೇಸ್ ಸೇಫ್ಟಿ ಕಾರಿನ ಹಿಂದೆ ಮತ್ತೆ ಆರಂಭವಾದ ಸ್ವಲ್ಪ ಕ್ಷಣದಲ್ಲೇ, ಜೋರಾದ ಮಳೆ ಆರಂಭವಾಗಿ ನೋರಿಸ್ ಮತ್ತು ಪಿಯಾಸ್ಟ್ರಿ ಇಬ್ಬರೂ ತಮ್ಮ ಕಾರಿನ ನಿಯಂತ್ರಣವನ್ನು ಕಳೆದುಕೊಂಡರು. ನೋರಿಸ್ ಅವರು ತಮ್ಮ ಕಾರನ್ನು ಕಷ್ಟಪಟ್ಟು ಕಾಪಾಡಿಕೊಂಡರೆ, ಪಿಯಾಸ್ಟ್ರಿ ಅವರ ಕಾರು ಟ್ರ್ಯಾಕ್ ಬದಿಯ ಹುಲ್ಲು ಹಾಸಿನ ಮೇಲೆ ಕಚ್ಚಿಕೊಂಡಿತ್ತು. ಹಾಗೂ ಹೀಗೂ ಕಷ್ಟಪಟ್ಟು ತಮ್ಮ ಕಾರನ್ನು ವಾಪಸ್ ಟ್ರ್ಯಾಕಿಗೆ ತರುವುದರೊಳಗೆ ಪಿಯಾಸ್ಟ್ರಿ ಅವರು ಕಡೆಯ ಸ್ಥಾನವನ್ನು ತಲುಪಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಎಲ್ಲಾ ಚಾಲಕರು ಪುನಃ ಇಂಟರ್ಸ್ ಟೈಯರ್ ಗೆ ತಮ್ಮ ಕಾರಿನ ಚಕ್ರಗಳನ್ನು ಬದಲಾಯಿಸಿಕೊಳ್ಳುತ್ತಿದ್ದರೆ ಬೋರ್ಟೊಲೆಟೋ ಮತ್ತು ಲಾಸನ್ ಅವರು ಕ್ರಮವಾಗಿ, ೬ ಮತ್ತು ೧೯ನೇ ತಿರುವಿನಲ್ಲಿ ತಮ್ಮ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ರೇಸಿನಿಂದ ಹೊರಬಿದ್ದರು.

ಮಳೆ, ಸ್ಟ್ರಾಟೆಜಿ ಮತ್ತು ಕ್ರ್ಯಾಶ್ ಗಳ ನಡುವೆ ಯಾರು ಯಾವ ಸ್ಥಾನದಲ್ಲಿ ಓಟವನ್ನು ಮುಗಿಸುತ್ತಾರೆ ಎಂಬ ಪ್ರಶ್ನಾರ್ಥಕ ಚಿನ್ಹೆ ಒಂದು ಕಡೆಯಾದರೆ, ನೋರಿಸ್ ಮತ್ತು ವೆರ್ಸ್ಟಪ್ಪನ್ ಮಾತ್ರಾ ತಮ್ಮ ನಾಗಾಲೋಟವನ್ನು ಮುಂದುವರೆಸಿ ರೇಸಿನ ಕೊನೆಯ ತಿರುವಿನವರೆಗೂ ಮೊದಲ ಸ್ಥಾನಕ್ಕೆ ಪೈಪೋಟಿಯನ್ನು ನಡೆಸಿದರು. ಕಡೆಗೆ ನೋರಿಸ್ ಮೊದಲ ಸ್ಥಾನವನ್ನು ಗಳಿಸಿ ವಿಜಯಿಯಾದರೆ, ವೆರ್ಸ್ಟಪ್ಪನ್ ಅವರು ತಮಗೆ ಯಾವ ಕಾರನ್ನು ನೀಡಿದರೂ ಅದ್ಭುತವಾಗಿ ಪ್ರದರ್ಶನ ನೀಡುತ್ತೇನೆ ಎಂದು ತೋರಿಸಿ ಎರಡನೆಯ ಸ್ಥಾನಕ್ಕೆ ತೃಪ್ತಿ ಪಟ್ಟರು. ಇನ್ನು ಓಟದಲ್ಲಿ ಯಾವ ತಪ್ಪನ್ನೂ ಮಾಡದ ಮರ್ಸಿಡಿಸ್ ತಂಡದ ಚಾಲಕ ರಸೆಲ್ ಮೂರನೇ ಸ್ಥಾನವನ್ನು ಪಡೆದರೆ, ಅವರ ಸಹಚಾಲಕ ಕಿಮಿ ಆಂಟೋನೆಲ್ಲಿ ತಮ್ಮ ಮೊಟ್ಟಮೊದಲ ಫಾರ್ಮುಲಾ ಒನ್ ಓಟದಲ್ಲಿ, ಮಳೆಯ ನಡುವೆಯೂ ನಾಲ್ಕನೇ ಸ್ಥಾನದಲ್ಲಿ ರೇಸನ್ನು ಮುಗಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದರು. ಆಲ್ಬನ್ ೫ ಮತ್ತು ಸ್ಟ್ರಾಲ್ ೬ನೇ ಸ್ಥಾನ ಗಳಿಸಿದರೆ, ತಮ್ಮ ಮೊದಲ ಸೌಬರ್ ಪಯಣದಲ್ಲಿ ೭ನೇ ಸ್ಥಾನ ಗಳಿಸುವ ಮೂಲಕ ೬ ಅಂಕಗಳನ್ನು ಗಳಿಸಿ ಸೌಬರ್ ಅವರ ೨೦೨೪ರ ಪೂರ್ಣ ಸೀಸನಲ್ಲಿ ಗಳಿಸಿದ್ದಕ್ಕಿಂತ ಎರಡು ಹೆಚ್ಚುವರಿ ಅಂಕಗಳನ್ನು ಒಂದೇ ಓಟದಲ್ಲಿ ಗಳಿಸಿದ ನಿಕೋ ಹ್ಯೂಲ್ಕನ್ಬರ್ಗ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇನ್ನು ಸ್ಟ್ರಾಟಜಿಯಲ್ಲಿ ಎಡವಿದ ಫೆರಾರಿ ತಂಡ ೮ ಮತ್ತು ೧೦ನೆಯ ಸ್ಥಾನಕ್ಕೆ ತೃಪ್ತಿಪಟ್ಟರೆ, ಒಳ್ಳೆಯ ರಿಕವರಿ ಡ್ರೈವ್ ಮೂಲಕ ಪಿಯಾಸ್ಟ್ರಿ ಅವರು ೯ನೇ ಸ್ಥಾನ ಗಳಿಸಿ ತಮ್ಮ ತವರು ರೇಸಲ್ಲಿ ಕೇವಲ ೨ ಅಂಕ ಗಳಿಸಿ ಸಮಾಧಾನ ಪಡಬೇಕಾಯಿತು. ಇನ್ನು ರೇಸ್ ನ ಬಹುತೇಕ ಸಮಯವನ್ನು ಅಂಕಗಳ ಒಳಗೆ ಕಳೆದರೂ ಗ್ಯಾಸ್ಲಿ ಮತ್ತು ತ್ಸುನೋಡ ೧೧ ಮತ್ತು ೧೨ನೇ ಸ್ಥಾನವನ್ನು ಗಳಿಸಿ ನಿರಾಶೆ ಅನುಭವಿಸಿದರು. ಇನ್ನು ಕಾರ್ ಮತ್ತು ಸ್ಟ್ರಾಟೆಜಿ ಎರಡರಲ್ಲೂ ಎಡವಿದ ಹಾಸ್ ತಂಡದ ಚಾಲಕರು ಕೊನೆಯ ಎರಡು ಸ್ಥಾನ ಗಳಿಸಿದ್ದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ.

ಮಳೆ, ಅನಿಶ್ಚಿತತೆ, ಕ್ರ್ಯಾಶ್ ಮತ್ತು ಇನ್ನಿತರ ರೋಚಕ ಕ್ಷಣಗಳಿಂದ ಕೂಡಿದ್ದ ಆಸ್ಟ್ರೇಲಿಯನ್ ಗ್ರ್ಯಾನ್ ಪ್ರೀ, ಅಭಿಮಾನಿಗಳಿಗೆ ಯಾವ ರೀತಿಯ ನಿರಾಸೆಯನ್ನು ಮೂಡಿಸದೆ ಟಿವಿಯ ಮುಂದೆ ಕಟ್ಟಿ ಕೂರಿಸಿತ್ತು ಎಂದರೆ ತಪ್ಪಾಗಲಾರದು!

ನಮ್ಮ ನಿಮ್ಮ ಭೇಟಿ ಮುಂದಿನ ಚೈನೀಸ್ ಗ್ರ್ಯಾನ್ ಪ್ರೀ ನಂತರ!

ಚಿತ್ರಕೃಪೆ: ಫಾರ್ಮುಲಾ ೧ ಮಿಂದಾಣ (Copyright - F1 Website)