ಫಾರ್ಮುಲಾ ೧ - ಚೈನೀಸ್ ಗ್ರ್ಯಾನ್ ಪ್ರೀ ೨೦೨೫

೨೦೨೫ನೇ ಸಾಲಿನ ಎಫ್ ೧ ಎರಡನೆಯ ರೇಸಿನ ಕುರಿತ ವಿಮರ್ಶೆ

ಮೇಟಿಕುರ್ಕೆ

3/30/20251 ನಿಮಿಷ ಓದಿ

ಆಸ್ಟ್ರೇಲಿಯಾದಲ್ಲಿ ನಡೆದ ಎಫ್ ಒನ್ ಓಟದಲ್ಲಿ ಮಳೆ ಬಿದ್ದ ಕಾರಣ, ರೇಸ್ ಬಹಳ ಕುತೂಹಲಕಾರಿಯಾಗಿದ್ದರೂ ಎಲ್ಲಾ ಕಾರುಗಳ ಮತ್ತು ಅನನುಭವಿ (Rookie) ಚಾಲಕರ ಸಂಪೂರ್ಣ ಸಾಮರ್ಥ್ಯ ತಿಳಿಯುವ ಅವಕಾಶ ಸಿಗಲಿಲ್ಲ. ಈ ಬಾರಿ ಸಂಪೂರ್ಣ ಒಣ ವಾತಾವರಣ ಮತ್ತು ಹೆಚ್ಚುವರಿ ಸ್ಪ್ರಿಂಟ್ ಕ್ವಾಲಿಫೈಯಿಂಗ್ ಮತ್ತು ರೇಸ್ ಇದ್ದ ಕಾರಣ, ಎಲ್ಲಾ ವಾಹನ ಮತ್ತು ಚಾಲಕರ ಕುರಿತು ಹೆಚ್ಚಿನ ಸ್ಪಷ್ಟತೆ ದೊರಕಿತು!

ಸ್ಪ್ರಿಂಟ್ ಅರ್ಹತಾ ಸುತ್ತು (ಸ್ಪ್ರಿಂಟ್ ಕ್ವಾಲಿಫೈಯಿಂಗ್)

ಆಸ್ಟ್ರೇಲಿಯಾದಲ್ಲಿ ೮ನೆಯ ಸ್ಥಾನದಲ್ಲಿ ಅರ್ಹತೆ ಹೊಂದುವ ಮೂಲಕ, ಟಿಫೋಸಿಗಳಿಗೆ ಬೇಸರ ಮೂಡಿಸಿದ್ದ ಲೂಯಿಸ್ ಹ್ಯಾಮಿಲ್ಟನ್ ಅವರು, ಈ ಬಾರಿ ಪೋಲ್ ಪೋಸಿಶನ್ ಅಂದರೆ ಮೊದಲ ಸ್ಥಾನದಲ್ಲಿ ಅರ್ಹತೆ ಹೊಂದುವ ಮೂಲಕ, ತಮ್ಮ ಫರಾರಿಯ ನಾಗಾಲೋಟವನ್ನು ಅಧಿಕೃತವಾಗಿ ಆರಂಭಿಸಿದರೆ ಅವರ ಸಹ ಚಾಲಕ ಲೆಕ್ಲೆರ್ಕ್ ನಾಲ್ಕನೇ ಸ್ಥಾನದಲ್ಲಿ ಅರ್ಹತೆ ಹೊಂದಿದರು. ಇನ್ನು ಎಂದಿನಂತೆ ಯಾವ ಟ್ರ್ಯಾಕ್ ಇರಲಿ ಯಾವ ಕಾರ್ ಇರಲಿ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಅತ್ಯದ್ಭುತ ಪ್ರದರ್ಶನ ನೀಡಿದ ಮ್ಯಾಕ್ಸ್ ವೆರ್ಸ್ಟಪ್ಪನ್ ಎರಡನೇ ಸ್ಥಾನದಲ್ಲಿ ಅರ್ಹತೆ ಹೊಂದಿದರೆ, ಅವರ ಸಹಚಾಲಕ ಲಿಯಾಮ್ ಲಾಸನ್ ಅವರು ಕಡೆಯ ಸ್ಥಾನದಲ್ಲಿ ಅರ್ಹತೆ ಹೊಂದಿದ ಕಾರಣ ಅವರ ಪ್ರದರ್ಶನವು ಚರ್ಚೆಗೆ ಗ್ರಾಸವಾಯಿತು. ಇನ್ನು ಸಂಪೂರ್ಣ ಒಣ ವಾತಾವರಣದಲ್ಲಿ ನಡೆದ ಕ್ವಾಲಿಫೈಯಿಂಗ್ನಲ್ಲಿ ಸೆಟಪ್ ದೋಷವೋ ಏನೋ ಮೆಕ್ಲಾರೆನ್ ತಂಡ ತನ್ನ ಕಾರಿನ ಪೂರ್ಣ ಸಾಮರ್ಥ್ಯವನ್ನು ತೋರಿಸಲು ವಿಫಲವಾಯಿತು ಎಂದರೆ ತಪ್ಪಾಗಲಾರದು. ಹೀಗಾಗಿ ಪಿಯಾಸ್ಟ್ರಿ ಅವರು ಮೂರನೇ ಸ್ಥಾನದಲ್ಲಿ ಅರ್ಹತೆ ಹೊಂದಿದರೆ ಅವರ ಸಹ ಚಾಲಕ ನಾರಿಸ್ ಅವರು ಆರನೆಯ ಸ್ಥಾನದಲ್ಲಿ ಕ್ವಾಲಿಫೈ ಆದರು. ಇನ್ನು ಮರ್ಸಿಡಿಸ್ ತಂಡದ ಚಾಲಕರಾದ ರಸೆಲ್ ಮತ್ತು ಆಂಟೋನೆಲ್ಲಿ ಕ್ರಮವಾಗಿ ಐದು ಮತ್ತು ಏಳನೇ ಸ್ಥಾನದಲ್ಲಿ ಅರ್ಹತೆ ಹೊಂದಿದರೆ, ರೇಸಿಂಗ್ ಬುಲ್ಸ್ ತಂಡದ ಯೂಕಿ ತ್ಸುನೋಡ ಅವರು ಗಮನಾರ್ಹ ಪ್ರದರ್ಶನದ ಮೂಲಕ ಎಂಟನೆಯ ಸ್ಥಾನದಲ್ಲಿ ಅರ್ಹತೆ ಹೊಂದುವ ಮೂಲಕ ಪಾಯಿಂಟ್ಸ್ ಗಳಿಸುವ ಸ್ಥಾನದಲ್ಲಿ ಸ್ಪ್ರಿಂಟ್ ರೇಸನ್ನು ಆರಂಭಿಸುವ ಅವಕಾಶವನ್ನು ಪಡೆದುಕೊಂಡರು.

ಸ್ಪ್ರಿಂಟ್ ಓಟ (ಸ್ಪ್ರಿಂಟ್ ರೇಸ್)

ಸ್ಪ್ರಿಂಟ್ ರೇಸ್ ಅನ್ನು ಅದ್ಭುತವಾಗಿ ಆರಂಭಿಸಿದ ಲೂಯಿಸ್ ಹ್ಯಾಮಿಲ್ಟನ್ ಅವರು ಮೊದಲ ತಿರುವಿನಲ್ಲಿ ಮ್ಯಾಕ್ಸ್ ವೆರ್ಸ್ಟಪ್ಪನ್ ಅವರ ಆಕ್ರಮಣವನ್ನು ತಡೆದು, ಮುನ್ನಡೆಯನ್ನು ಕಾಯ್ದುಕೊಂಡು ರೇಸ್ ನ ಉದ್ದಕ್ಕೂ ಯಾವುದೇ ತಪ್ಪನ್ನು ಮಾಡದೆ ಫೆರಾರಿಯಲ್ಲಿ ತಮ್ಮ ಮೊದಲ ಗೆಲುವಿನ ನಗೆಯನ್ನು ಬೀರಿ ಟಿಫೋಸಿಗಳ ಸಂಭ್ರಮಕ್ಕೆ ಕಾರಣರಾದರೆ, ಅವರ ಟೀಮ್ ಮೇಟ್ ಚಾರ್ಲ್ಸ್ ಲೆಕ್ಲೇರ್ಕ್ ಅವರು ಜಾರ್ಜ್ ರಸೆಲ್ ಅವರನ್ನು ಹಿಂದಿಕ್ಕಲಾರದೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು ಎರಡನೇ ಸ್ಥಾನದಲ್ಲಿ ರೇಸನ್ನು ಆರಂಭಿಸಿದ ವೆರ್ಸ್ಟಪ್ಪನ್ ಅವರು, ಹ್ಯಾಮಿಲ್ಟನ್ ಅವರ ಹಿಂದೆ ಬಹಳ ಸಮಯ ಕಳೆದ ಕಾರಣ, ತಮ್ಮ ಟೈಯರ್ ಸವೆದು ಮೂರನೇ ಸ್ಥಾನಕ್ಕೆ ಕುಸಿದರೆ, ಬಹಳ ಸೊಗಸಾಗಿ ಟೈಯರ್ ನ ಕುಶಲೋಪರಿ ನೋಡಿಕೊಂಡು ಕಡೆಯಲ್ಲಿ ತಮ್ಮ ಕಾರಿನ ಸಂಪೂರ್ಣ ಪ್ರಾಬಲ್ಯವನ್ನು ಅನ್ಲಾಕ್ ಮಾಡಿದ ಆಸ್ಕರ್ ಪಿಯಾಸ್ಟ್ರಿ, ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಇನ್ನು ಶುರುವಿನಿಂದ ಕಡೆಯವರೆಗೂ ತಮ್ಮದೇ ರೇಸನ್ನು ಓಡಿಸಿದ ಜಾರ್ಜ್ ರಸೆಲ್ ಅವರು ನಾಲ್ಕನೆಯ ಸ್ಥಾನವನ್ನು ಪಡೆದರೆ ಅವರ ಅನನುಭವಿ ಸಹಚಾಲಕ ಕಿಮೀ ಆಂಟೋನೆಲ್ಲಿ ೭ ನೇ ಸ್ಥಾನವನ್ನು ಗಳಿಸಿ ತಮ್ಮ ಪಾಯಿಂಟ್ಸ್ ಕಲೆ ಹಾಕುವ ಶಕ್ತಿಯನ್ನು ಪ್ರದರ್ಶಿಸಿದರು. ಒಂದು ಕಡೆ ಲಿಯಾಮ್ ಲಾಸನ್ ಅವರು ಎಡವುತ್ತಿದ್ದರೆ, ತಮ್ಮ ರೇಸಿಂಗ್ ಬುಲ್ಸ್ ಕಾರಲ್ಲಿ ಯೂಕಿ ತ್ಸುನೋಡ ಅದ್ಬುತ ಆರನೇ ಸ್ಥಾನವನ್ನು ಗಳಿಸುವ ಮೂಲಕ ಮೂರು ಅಂಕಗಳನ್ನು ಕಲೆ ಹಾಕಿ, ರೆಡ್ಬುಲ್ ತಂಡದ ಬಾಗಿಲು ತೆರೆಯುವಂತಹ ಪ್ರದರ್ಶನವನ್ನು ನೀಡಿದರು. ಇನ್ನು ಬಹುಕಾಲ ಲ್ಯಾನ್ಸ್ ಸ್ಟ್ರೋಲ್ ಹಿಂದೆ ತಮ್ಮ ಸಮಯವನ್ನು ಕಳೆದ ಲ್ಯಾಂಡೋ ನಾರಿಸ್ ಕಡೆಗೂ ಅವರನ್ನು ಹಿಂದಿಕ್ಕಿ ಕಡೆಯಲ್ಲಿ ಉಳಿದಿದ್ದ ಒಂದು ಅಂಕವನ್ನು ತಮ್ಮದಾಗಿಸಿಕೊಂಡು ತೃಪ್ತಿಪಡಬೇಕಾಯಿತು.

ಮುಖ್ಯ ಅರ್ಹತಾ ಸುತ್ತು (ಕ್ವಾಲಿಫೈಯಿಂಗ್)

ಸ್ಪ್ರಿಂಟ್ ಕ್ವಾಲಿಫೈಯಿಂಗ್ ಅಲ್ಲಿ ತಮ್ಮ ತಪ್ಪುಗಳನ್ನು ಅರಿತ ಮೆಕ್ಲಾರೆನ್, ಮುಖ್ಯ ರೇಸಿನ ಅರ್ಹತಾ ಸುತ್ತಿನಲ್ಲಿ ಬಹಳ ಅದ್ಬುತ ಪ್ರದರ್ಶನವನ್ನು ತೋರಿಸುವ ಮೂಲಕ ಪೋಲ್ ಪೊಸಿಷನ್ ಮತ್ತು ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು, ಅಲ್ಲದೆ ಇದು ಆಸ್ಕರ್ ಪಿಯಾಸ್ಟ್ರಿ ಅವರ ಚೊಚ್ಚಲ ಪೋಲ್ ಪೊಸಿಷನ್ ಆದ ಕಾರಣ, ಮತ್ತೂ ವಿಶೇಷವಾಗಿತ್ತು. ತಮ್ಮ ಕಾರಿನ ಸಂಪೂರ್ಣ ಸಾಮರ್ಥ್ಯ ಕ್ಕಿಂತ ಹೆಚ್ಚಾಗಿ ಓಡಿಸಿದ ಜಾರ್ಜ್ ರಸೆಲ್ ಅವರು ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡು ಮೊದಲ ಸಾಲಿನಲ್ಲಿ ರೇಸ್ ಅನ್ನು ಆರಂಭಿಸುವ ಅವಕಾಶವನ್ನು ಪಡೆದರು. ಇನ್ನು ಮ್ಯಾಕ್ಸ್ ವೆರ್ಸ್ಟಪ್ಪನ್ ನಾಲ್ಕನೇ ಸ್ಥಾನವನ್ನು ಗಳಿಸಿದರೆ ಅವರ ಸಹಚಾಲಕ ಲಿಯಾಮ್ ಲಾಸನ್ ಅವರು ಮತ್ತೊಮ್ಮೆ ಕೊನೆಯ ಸ್ಥಾನದಲ್ಲಿ ಅರ್ಹತೆ ಹೊಂದುವ ಮೂಲಕ, ರೆಡ್ಬುಲ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇನ್ನು ಸ್ಪ್ರಿಂಟ್ ರೇಸನ್ನು ಗೆದ್ದಿದ್ದ ಲೂಯಿಸ್ ಹ್ಯಾಮಿಲ್ಟನ್ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಅವರ ಸಹಚಾಲಕ ಚಾರ್ಲ್ಸ್ ಲೆಕ್ಲೇರ್ಕ್ ೬ ನೇ ಸ್ಥಾನವನ್ನು ಗಳಿಸುವ ಮೂಲಕ ಫೆರಾರಿ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದರು. ಇನ್ನು ತಮ್ಮ ರೂಕಿ ಹಂತದಲ್ಲಿಯೇ ತಮ್ಮ ಅನುಭವಿ ಟೀಮ್ ಮೇಟ್ ಅನ್ನು ಔಟ್ ಪರ್ಫಾರ್ಮ್ ಮಾಡುವ ಮೂಲಕ ಇಸಾಕ್ ಹಡ್ಜರ್ ಅವರು ೭ ನೇ ಸ್ಥಾನದಲ್ಲಿ ಅರ್ಹತೆ ಹೊಂದಿದರೆ, ಕಿಮೀ ಆಂಟೋನೆಲ್ಲಿ ಅವರು ಒಳ್ಳೆಯ ಪ್ರದರ್ಶನದ ಮೂಲಕ ೮ನೆಯ ಸ್ಥಾನದಲ್ಲಿ ಅರ್ಹತೆ ಹೊಂದಿದರು. ಇನ್ನು ಅನುಭವಿ ಚಾಲಕ ಯೂಕಿ ತ್ಸುನೋಡ ಒಂಬತ್ತನೇ ಸ್ಥಾನಕ್ಕೆ ತೃಪ್ತಿ ಪಟ್ಟರೆ, ವಿಲಿಯಮ್ಸ್ ನ ಅಲೆಕ್ಸ್ ಆಲ್ಬನ್ ಅವರು ೧೦ ನೇ ಸ್ಥಾನವನ್ನು ಗಳಿಸಿ ರೇಸನ್ನು ಮೊದಲ ಹತ್ತರಲ್ಲಿ ಅಂದರೆ ಪಾಯಿಂಟ್ಸ್ ಗಳಿಸುವ ಅವಕಾಶ ಇರುವ ಸ್ಥಾನದಲ್ಲಿ ಆರಂಭಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡರು.

ಮುಖ್ಯ ಓಟ (ರೇಸ್)

ಬಹಳ ಉತ್ತಮವಾದ ಆರಂಭವನ್ನು ಪಡೆದ ಆಸ್ಕರ್ ಪಿಯಾಸ್ಟ್ರಿ ಅವರು ಮೊದಲಿನಿಂದ ಕೊನೆಯವರೆಗೂ ಎಲ್ಲೂ ತಮ್ಮ ಮುನ್ನಡೆಯನ್ನು ಬಿಟ್ಟುಕೊಡದೆ ಮೊದಲ ಸ್ಥಾನದಲ್ಲಿಯೇ ಓಟವನ್ನು ಪೂರ್ಣಗೊಳಿಸಿ, ಆಸ್ಟ್ರೇಲಿಯಾದಲ್ಲಿ ಆದ ಕಹಿ ಅನುಭವವನ್ನು ಮರೆತರೆ, ಅವರ ಪ್ರತಿಸ್ಪರ್ಧಿ ಲ್ಯಾಂಡೋ ನಾರಿಸ್ ಅವರು ಅದ್ಭುತವಾದ ಆರಂಭದ ಮೂಲಕ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದು ಕಡೆಯಲ್ಲಿ ಪಿಯಾಸ್ಟ್ರಿ ಅವರ ಮೇಲೆ ಸ್ವಲ್ಪ ಒತ್ತಡವನ್ನು ಹೇರುತ್ತಾರೆ ಎಂದುಕೊಳ್ಳುವ ಹೊತ್ತಿಗೆ, ಅವರ ಕಾರಿನಲ್ಲಿ ಉಂಟಾದ ಬ್ರೇಕಿನ ವೈಫಲ್ಯದಿಂದ, ಅವರು ತಮ್ಮ ಎರಡನೇ ಸ್ಥಾನವನ್ನೇ ಹೋರಾಡಿ ಉಳಿಸಿಕೊಳ್ಳುವ ಹಾಗಾಯಿತು. ಇನ್ನು ಎರಡನೆಯ ಸ್ಥಾನದಲ್ಲಿ ರೇಸನ್ನು ಆರಂಭಿಸಿದ ರಸೆಲ್ ಅವರು ತಮ್ಮದೇ ಓಟವನ್ನು ನಡೆಸಿಕೊಂಡು ಉತ್ತಮ ಸ್ಟ್ರಾಟಜಿಯ ಸಹಾಯದ ಮೂಲಕ ಮೂರನೇ ಸ್ಥಾನವನ್ನು ಗಳಿಸಿ ಪೋಡಿಯಂ ಅಲ್ಲಿ ಸಂಭ್ರಮಿಸುವ ಅವಕಾಶವನ್ನು ಪಡೆದರು.

ರೇಸಿನ ಉದ್ದಕ್ಕೂ ಟಯರ್ ಸವಳಿಕೆ (degradation) ಸಮಸ್ಯೆಯನ್ನು ಅನುಭವಿಸಿದ ವೆರ್ಸ್ಟಪ್ಪನ್ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಹಳಷ್ಟು ಕಾಲ ಜಾರ್ಜ್ ರಸೆಲ್ ಅವರ ಹಿಂದೆಯೇ ರೇಸನ್ನು ಕಳೆದ ಫೆರಾರಿ ಚಾಲಕರು ರೇಸ್ ಮುಗಿದಾಗ ಐದು ಮತ್ತು ಆರನೇ ಸ್ಥಾನದಲ್ಲಿ ತಮ್ಮ ಓಟವನ್ನು ಮುಗಿಸಿ ಫೆರಾರಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರೆ, ರೇಸಿನ ನಂತರ ಅವರ ಕಾರುಗಳು minimum weight ಅಂದರೆ ಕನಿಷ್ಠ ತೂಕದ ಮಿತಿಯನ್ನು ಪೂರೈಸದ ಕಾರಣ ಓಟದಿಂದ ಅನರ್ಹರಾಗಿದ್ದು ಟಿಪೋಸಿಗಳಿಗೆ ಆಗಿದ್ದ ಗಾಯದ ಮೇಲೆ ಬರೆಯನ್ನು ಎಳೆದಂತಾಯಿತು. ಸ್ಪ್ರಿಂಟ್ ಅಲ್ಲಿ ಗೆಲುವಿನ ನಗೆಯನ್ನು ಬೀರಿದ್ದ ಫೆರಾರಿ ತಂಡವು ಮುಖ್ಯ ಓಟದಲ್ಲಿ ಒಂದೂ ಅಂಕವನ್ನು ಗಳಿಸದೆ ಚೀನಾವನ್ನು ತೊರೆದದ್ದು constructor's championship ಸ್ಪರ್ಧೆಗೆ ಬಹಳ ದೊಡ್ಡ ಹೊಡೆತವನ್ನು ಉಂಟು ಮಾಡಿತು ಎಂದರೆ ತಪ್ಪಾಗಲಾರದು. ಇವರ ಜೊತೆಗೆ ಅಂಕಗಳನ್ನು ಗಳಿಸದಿದ್ದರೂ ೧೧ನೇ ಸ್ಥಾನದಲ್ಲಿ ರೇಸ್ ಅನ್ನು ಮುಗಿಸಿದ್ದ ಗ್ಯಾಸ್ಲಿ ಅವರು ಕೂಡಾ ಅನರ್ಹತೆ ಹೊಂದಿದರು.

ಈ ಎಲ್ಲಾ ಅನರ್ಹತೆಯ ಲಾಭವನ್ನು ಪಡೆದ ಹಾಸ್ ತಂಡದ ಚಾಲಕರಾದ ಎಸ್ಟಬಾನ್ ಆಕಾನ್ ಮತ್ತು ಆಲ್ಲೀ ಬೇರ್ಮನ್ ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನದಲ್ಲಿ ಓಟವನ್ನು ಮುಗಿಸುವ ಮೂಲಕ ಹಾಸ್ ತಂಡಕ್ಕೆ ಅಮೂಲ್ಯ ೧೪ ಅಂಕಗಳನ್ನು ತಂದುಕೊಟ್ಟರು. ಇನ್ನು ತಮ್ಮ ಅದ್ಭುತ ಓಟವನ್ನು ಮುಂದುವರೆಸದ ಕಿಮಿ ಆಂಟೋನೆಲ್ಲಿ ಅವರು ಆರನೇ ಸ್ಥಾನವನ್ನು ಗಳಿಸುವ ಮೂಲಕ ಅನನುಭವಿ ಚಾಲಕರಾದರೂ ಓಡಿಸಿದ ಮೂರು ರೇಸುಗಳಲ್ಲಿಯೂ ಪಾಯಿಂಟ್ ಅನ್ನು ಪಡೆಯುವ ಮೂಲಕ ಎಫ್ ಒನ್ ಅಭಿಮಾನಿಗಳ ಮತ್ತು ಅನಾಲಿಸ್ಟ್ಗಳ ಮೆಚ್ಚುಗೆಗೆ ಪಾತ್ರರಾದರು, ಅಲ್ಲದೆ ಡ್ರೈವರ್ ಆಫ್ ದ ಡೇ ಗೌರವವನ್ನೂ ತಮ್ಮದಾಗಿಸಿಕೊಂಡರು.

ಇನ್ನು ವಿಲಿಯಮ್ಸ್ ತಂಡದ ಅಲೆಕ್ಸ್ ಆಲ್ಬನ್ ಅವರು ಏಳನೇ ಸ್ಥಾನದಲ್ಲಿ ಓಟವನ್ನು ಮುಗಿಸಿದರೆ ಅವರ ಸಹ ಓಟಗಾರ ಕಾರ್ಲೋಸ್ ಸೈನ್ಜ್ ರವರು ಹತ್ತನೇ ಸ್ಥಾನದಲ್ಲಿ ಓಟವನ್ನು ಮುಗಿಸುವ ಮೂಲಕ ಒಂದು ಅಂಕವನ್ನು ಕಲೆಹಾಕಿ ವಿಲಿಯಮ್ಸ್ ತಂಡದ ಪರವಾಗಿ ಅವರು ತಮ್ಮ ಅಂಕದ ಖಾತೆಯನ್ನು ತೆರೆದರು. ಇನ್ನು ತಮ್ಮ ಪ್ರದರ್ಶನವನ್ನು ನಿಜಕ್ಕೂ ಮೇಲ್ದರ್ರ್ಜೆಗೆ ಏರಿಸಿಕೊಂಡಿರುವ ಆಸ್ಟನ್ ಮಾರ್ಟಿನ್ ತಂಡದ ಸ್ಟ್ರೋಲ್ ಅವರು ೮ನೆಯ ಸ್ಥಾನದಲ್ಲಿ ಎರಡು ಅಂಕಗಳನ್ನು ಕಲೆಹಾಕುವ ಮೂಲಕ, ತಾವು ನಿಜಕ್ಕೂ ಒಬ್ಬ ಬಿಲಿಯನೇರ್ ಮಗನಾಗಿ ಎಫ್ ಒನ್ ಅಲ್ಲಿಲ್ಲ, ತಮ್ಮ ಸ್ವಂತ ಪ್ರತಿಭೆಯಿಂದ ಇರುವುದಾಗಿ ಸಾಬೀತುಪಡಿಸಿದರು.

ಹೊಸದಾದ ಮೇಲ್ಮೈ ಹೊಂದಿರುವ ಟ್ರ್ಯಾಕ್ ಆಗಿರುವ ಕಾರಣ ಎಲ್ಲೋ ಒಂದು ಕಡೆ ಟೈರ್ ಕುರಿತು ಅನಿಶ್ಚಿತತೆ ಇದ್ದ ಕಾರಣ ಹಲವಾರು ತಂಡಗಳು ತಮ್ಮ ಸ್ಟ್ರಾಟೆಜಿಯಲ್ಲಿ ಎಡವಿದವು ಎಂದರೆ ತಪ್ಪಾಗಲಾರದು. ಈ ಕಾರಣ ಇಷ್ಟೆಲ್ಲಾ ಡಿಸ್ಕ್ವಾಲಿಫಿಕೇಷನ್ ಇನ್ನೊಂದು ಮತ್ತೊಂದು ಇದ್ದರೂ ಇಸಾಕ್ ಹಡ್ಜರ್ ಅವರು ೧೧ನೇ ಸ್ಥಾನವನ್ನು ಪಡೆಯುವ ಮೂಲಕ ತಮ್ಮ ಮೊಟ್ಟಮೊದಲ ಪಾಯಿಂಟ್ಸ್ ಗಳಿಸುವ ಅವಕಾಶದಿಂದ ವಂಚಿತರಾದರೆ, ಲಿಯಾಮ್ ಲಾಸನ್ ಅವರು ೧೨ನೇ ಸ್ಥಾನವನ್ನು ಗಳಿಸಿ ರೆಡ್ಬುಲ್ ಅಭಿಮಾನಿಗಳಿಗೆ ಮತ್ತೂಮ್ಮೆ ನಿರಾಶೆ ಮೂಡಿಸಿದರು. ಇನ್ನು ಫರ್ನಾಂಡೋ ಅಲಾಂಸೊ ಅವರು ಮತ್ತೊಮ್ಮೆ DNF(ಓಟವನ್ನು ಪೂರ್ಣಗೊಳಿಸದಿರುವುದು) ಆಗುವ ಮೂಲಕ ನಿರಾಶೆ ಅನುಭವಿಸಿದರೆ, ಸೌಬರ್ ತಂಡದ ಚಾಲಕರು ಅಂಕಗಳನ್ನು ಗಳಿಸದಿದ್ದದು ಅಚ್ಚರಿಯ ವಿಷಯವೇನಲ್ಲ. ಇನ್ನು ರೇಸಿನಲ್ಲಿ ಬಹುತೇಕ ಸಮಯವನ್ನು ಪಾಯಿಂಟ್ಸ್ ಒಳಗೆ ಕಳೆದರೂ, ಕೆಟ್ಟ ಸ್ಟ್ರಾಟೆಜಿ ಮತ್ತು ಇನ್ನೇನು ರೇಸ್ ಮುಗಿಯುವ ಹಂತದಲ್ಲಿ ಫ್ರಂಟ್ ವಿಂಗ್ ಮರಿದುಹೋದ ಕಾರಣ ಯೂಕೀ ತ್ಸುನೋಡ ಅವರು ರೇಸಿನಲ್ಲಿ ಹಿಂದಕ್ಕೆ ಬಿದ್ದು ೧೬ನೆಯ ಸ್ಥಾನವನ್ನು ಗಳಿಸಿ ತಮ್ಮದಲ್ಲದ ತಪ್ಪಿಗೆ ನಿರಾಶೆಯನ್ನು ಅನುಭವಿಸಬೇಕಾಯಿತು. ಆದರೆ ತ್ಸುನೋಡ ಅವರಿಗೆ ರೇಸ್ ಮುಗಿದ ಕೆಲವು ದಿನಗಳ ನಂತರ ಸಂತಸದ ಸುದ್ದಿಯೊಂದು ಕಾಯುತ್ತಿತ್ತು.

ರೆಡ್ಬುಲ್ ತಂಡದ ಸುದ್ದಿ

ಲಿಯಾಮ್ ಲಾಸನ್ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ ಅವರನ್ನು ಮರಳಿ ರೇಸಿಂಗ್ ಬುಲ್ಸ್ ತಂಡಕ್ಕೆ ಕಳಿಸುವ ನಿರ್ಧಾರ ಮಾಡಿದ ರೆಡ್ಬುಲ್ ತಂಡವು ತ್ಸುನೋಡ ಅವರನ್ನು ಪ್ರಮೋಟ್ ಮಾಡಿದ್ದಾರೆ. ಹೀಗಾಗಿ ತ್ಸುನೋಡ ಅವರು ತಮ್ಮ ತವರು ರೇಸ್ ಜಾಪನೀಸ್ ಗ್ರ್ಯಾನ್ ಪ್ರೀಯಲ್ಲಿ ವೆರ್ಸ್ಟಪ್ಪನ್ ಅವರ ಸಹ ಓಟಗಾರರಾಗಿ ಚಾಲನೆ ಮಾಡುತ್ತಾರೆ.

ಚಿತ್ರಕೃಪೆ: ಫಾರ್ಮುಲಾ ೧ ಮಿಂದಾಣ (Copyright - F1 Website)