ಫಾರ್ಮುಲಾ ೧ - ಜಾಪನೀಸ್ ಗ್ರ್ಯಾನ್ ಪ್ರೀ ೨೦೨೫
೨೦೨೫ನೇ ಸಾಲಿನ ಎಫ್ ೧ ಮೂರನೆಯ ರೇಸಿನ ಕುರಿತ ವಿಮರ್ಶೆ
ಮೇಟಿಕುರ್ಕೆ
4/13/20251 ನಿಮಿಷ ಓದಿ


ಮೊದಲ ಎರಡು ರೇಸುಗಳಲ್ಲಿ ಈ ವರ್ಷದ ಅತ್ಯುತ್ತಮ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದು, ಸತತ ಎರಡು ರೇಸುಗಳನ್ನು ಗೆದ್ದು ಬೀಗಿದ್ದ ಮೆಕ್ಲಾರೇನ್ ತಂಡ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನವನ್ನು ತೋರಲು ಜಪಾನ್ ಅಲ್ಲಿ ಸಿದ್ಧವಾಗುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಸತತ ಪ್ರಯತ್ನಗಳ ಮೂಲಕ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿರುವ ಮ್ಯಾಕ್ಸ್ ವೆರ್ಸ್ಟಪ್ಪನ್ ಈ ಸಲದ ವಿಶ್ವ ಚಾಮ್ಪಿಯನ್ಶಿಪ್ ಅಲ್ಲಿ ತಮ್ಮ ಛಾಪನ್ನು ಮೂಡಿಸಲು ಹಾತೊರೆಯುತ್ತಿದ್ದರು. ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ರೆಡ್ಬುಲ್ ತಂಡ ತನ್ನ ಚಾಲಕರ ಬದಲಾವಣೆ ಮಾಡಿದ್ದು ಬಹಳ ಚರ್ಚೆಯ ವಿಷಯವಾಗಿತ್ತು. ಹೀಗಾಗಿ ತಂಡ, ಚಾಲಕ, ರೇಸಿಂಗ್ ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚಿನ ಮಂದಿಯ ಗಮನ ಯೂಕಿ ಸುನೋಡಾ ಅವರು ರೆಡ್ ಬುಲ್ ತಂಡದ ಪ್ರದರ್ಶನದ ಕಡೆಗಿತ್ತು ಎಂದರೆ ತಪ್ಪಾಗಲಾರದು.
ಎಲ್ಲೋ ಒಂದು ಕಡೆ ಜಾಪನೀಸ್ ಗ್ರ್ಯಾನ್ ಪ್ರೀ ಈ ಋತುವಿನ ಮೊದಲ ಎರಡು ಓಟಗಳಷ್ಟು ಅಷ್ಟು ರೋಚಕತೆಯಿಂದ ಕೂಡಿಲ್ಲದಿದ್ದರೂ, ಅತ್ಯುತ್ತಮ ಚಾಲಕರು ಹೇಗೆ ತಮಗೆ ಬರುವ ಅವಕಾಶಗಳನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು, ಈ ಫಾರ್ಮುಲಾ ಒನ್ ಋತುವನ್ನು ಜೀವಂತವಾಗಿ ಇಟ್ಟಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು!
ಅರ್ಹತಾ ಸುತ್ತು
ಮೊದಲ ಎರಡು ಓಟಗಳ ನಂತರ ಎಲ್ಲರೂ ರೆಡ್ ಬುಲ್ ತಂಡದ ಕಾರಿನ ಸಾಮರ್ಥ್ಯವನ್ನು ಅಲ್ಲಗಳೆದು ಮೆಕ್ಲಾರೆನ್ ಈ ಋತುವಿನ ಅದ್ಭುತ ತಂಡ ಎಂದು ನಿರ್ಧಾರ ಮಾಡಿದ್ದರೂ, ಅಂತಹ ಕಾರಿನಲ್ಲಿ ಎಂದಿನಂತೆ ಅತ್ಯದ್ಭುತವಾಗಿ ಚಾಲನೆ ಮಾಡಿ ತಾನು ಯಾಕೆ ವಿಶ್ವ ಚಾಂಪಿಯನ್ ಎಂದು ನಿರೂಪಿಸಿ ಪೋಲ್ (ಮೊದಲ ಸ್ಥಾನ) ಪಡೆಯುವ ಮೂಲಕ ಪ್ಯಾಡಾಕ್ ನಲ್ಲಿರುವ ಎಲ್ಲರ ಮೆಚ್ಚುಗೆಗೆ ಮ್ಯಾಕ್ಸ್ ವೆರ್ಸ್ಟಪ್ಪನ್ ಅವರು ಪಾತ್ರರಾದರು.
ಇನ್ನು ಲಿಯಾಮ್ ಲಾಸನ್ ಜಾಗವನ್ನು ತುಂಬಿದ್ದ ಯೂಕಿ ಸುನೋಡಾ ಅವರ ಮೇಲೆ ಎಲ್ಲರ ಗಮನ ಇದ್ದರೂ, ಎಲ್ಲೋ ಒಂದು ಕಡೆ ಅವರು ಫ್ರೀ ಪ್ರಾಕ್ಟಿಸ್ ಅಲ್ಲಿ ತೋರಿದ ಮಾಡಿದ ಪ್ರದರ್ಶನವನ್ನು ಅರ್ಹತಾ ಸುತ್ತಿನಲ್ಲಿ ಮುಂದುವರಿಸಲಾರದೆ, ತಮ್ಮ ತವರು ಅಂಗಳದಲ್ಲಿ ೧೫ನೇ ಸ್ಥಾನವನ್ನು ಪಡೆಯುವ ಮೂಲಕ ನಿರಾಶೆ ಅನುಭವಿಸಿದರು. ಗಾಯದ ಮೇಲೆ ಬರಿಯ ಎಳೆದಂತೆ, ಅವರು ಯಾರ ಸ್ಥಾನವನ್ನು ರೆಡ್ಬುಲ್ ಅಲ್ಲಿ ತುಂಬಿದ್ದರೋ ಅದೇ ಚಾಲಕ ಯೂಕಿ ಸುನೋಡ ಅವರಿಗಿಂತ ಉತ್ತಮವಾಗಿ ಅರ್ಹತೆ ಹೊಂದುವ ಮೂಲಕ, ಎಲ್ಲೋ ಒಂದು ಕಡೆ ರೆಡ್ಬುಲ್ ಕಾರನ್ನು ಓಡಿಸುವುದು ಸುಲಭದ ಮಾತಾಗಿರಲಿಲ್ಲ ಎಂಬುದನ್ನು ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಮೊದಲ ಎರಡು ಓಟಗಳನ್ನು ಗೆದ್ದು ಬೀಗಿದ್ದ ಮೆಕ್ಲಾರೆನ್ ತಂಡದ ಚಾಲಕರಾದ ಲ್ಯಾಂಡೋ ನೊರಿಸ್ ಮತ್ತು ಆಸ್ಕರ್ ಪಿಯಾಸ್ಟ್ರಿ ಅವರು, ಮ್ಯಾಕ್ಸ್ ವೆರ್ಸ್ಟಪ್ಪನ್ ರವರ ಅದ್ಭುತ ಪ್ರದರ್ಶನದ ಕಾರಣ, ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇನ್ನು ಫೆರಾರಿಯ ಚಾರ್ಲ್ಸ್ ಲೆಕ್ಲೇರ್ಕ್ ನಾಲ್ಕನೇ ಸ್ಥಾನವನ್ನು ಪಡೆದರೆ, ಮರ್ಸಿಡಿಸ್ ತಂಡದ ಜಾರ್ಜ್ ರೆಸಲ್ ಮತ್ತು ರೂಕಿ (ಅನನುಭವಿ) ಚಾಲಕ ಕಿಮಿ ಆಂಟೊನೇಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಮವಾಗಿ ೫ ಮತ್ತು ೬ನೇ ಸ್ಥಾನವನ್ನು ಗಳಿಸಿದರು.
ರೇಸಿಂಗ್ ಬುಲ್ಸ್ ತಂಡದ ರೂಕಿ ಚಾಲಕ ಇಸಾಕ್ ಹಡ್ಜರ್ ರವರು ಏಳನೇ ಸ್ಥಾನವನ್ನು ಗಳಿಸಿದರೆ ಅನುಭವಿ ಚಾಲಕ ಲೂಯಿಸ್ ಹ್ಯಾಮಿಲ್ಟನ್ ತಮ್ಮ ಫೆರಾರಿಯಲ್ಲಿ ಎಂಟನೇ ಸ್ಥಾನವನ್ನು ಗಳಿಸುವ ಮೂಲಕ ಮತ್ತೊಮ್ಮೆ ನಿರಾಶೆ ಅನುಭವಿಸಿದರು. ಇನ್ನು ವಿಲಿಯನ್ಸ್ ನ ಅಲೆಕ್ಸ್ ಆಲ್ಬನ್ ಅವರು ೯ನೇ ಸ್ಥಾನ ಗಳಿಸಿದರೆ,ಹಾಸ್ ತಾಂಡದ ಆಲಿವರ್ ಬೇರ್ಮನ್ ಅವರು ೧೦ನೇ ಸ್ಥಾನವನ್ನು ಪಡೆಯುವ ಮೂಲಕ, ಮತ್ತೊಬ್ಬ ರೂಕಿ ಮೊದಲ ಹತ್ತರಲ್ಲಿ ಸ್ಥಾನ ಪಡೆದು ಈ ಸೀಸನ್ ರೂಕಿಗಳಿಗೆ ಬಹಳ ಅದ್ಭುತವಾದ ಸೀಸನ್ ಏನೋ ಎನ್ನುವಂತಹ ಪ್ರದರ್ಶನವನ್ನು ನೀಡಿದರು
ರೇಸ್
ಮೊದಲ ಎರಡು ಓಟಗಳಿಗೆ ಹೋಲಿಸಿದರೆ ಈ ರೇಸ್ ಬಹಳ ನಿರಾಸೆಯಿಂದ ಕೂಡಿತ್ತು, ಮೊದಲ ಲ್ಯಾಪ್ ಅಲ್ಲಿ ಯೂಕಿ ಸುನೋಡಾ ಅವರು ಲಿಯಾಮ್ ಲಾಸನ್ ಅವರನ್ನು, ಹಿಂದಕ್ಕಿದ್ದು ಮತ್ತು ಲೂಯಿಸ್ ಹ್ಯಾಮಿಲ್ಟನ್ ಅವರು ಇಸಾಕ್ ಹಡ್ಜರ್ ಅವರನ್ನು ಹಿಂದಕ್ಕಿದ್ದು ಬಿಟ್ಟರೆ ಈ ಓಟದಲ್ಲಿ ಅಂತಹ ಗಮನಾರ್ಹ ಸಂಗತಿಗಳು ಯಾವುದೂ ಇರಲಿಲ್ಲ. ಅರ್ಹತಾ ಸುತ್ತಿನಲ್ಲಿ ಯಾವ ಸ್ಥಾನದಲ್ಲಿ ಅರ್ಹತೆ ಪಡೆದಿದ್ದರೋ ರೇಸ್ ನಂತರವೂ ಮೊದಲ ಮೊದಲ ೧೦ ಸ್ಥಾನಗಳಲ್ಲಿ ಕೇವಲ ಒಂದೇ ಒಂದು (ಹ್ಯಾಮಿಲ್ಟನ್ ಹಡ್ಜರ್) ಬದಲಾವಣೆ ಬಿಟ್ಟರೆ ಮಿಕ್ಕೆಲ್ಲರೂ ತಾವು ಎಲ್ಲಿ ಓಟವನ್ನು ಆರಂಭಿಸಿದ್ದರೋ, ಅಲ್ಲಿಯೇ ಮುಗಿಸಿದರು. ಎಲ್ಲೋ ಒಂದು ಕಡೆ ಅರ್ಹತಾ ಸುತ್ತಿನಲ್ಲೇ ಓಟವು ಕೊನೆಯಾಗಿತ್ತು ಎಂದರೆ ಅದು ಅತಿಶಯೋಕ್ತಿ ಆಗದು.
ಇನ್ನು ಟ್ರ್ಯಾಕ್ ಅಗಲ ಬಹಳ ಕಿರಿದಾಗಿರುವ ಕಾರಣ, ಮತ್ತು ಸ್ಟ್ರಾಟೆಜಿ ಅಲ್ಲಿ ಯಾವುದೇ ಹೊಸ ಪ್ರಯೋಗವನ್ನು ಮಾಡಲು ಹಿಂಜರಿದ ಕಾರಣ, ಮೆಕ್ಲಾರೆನ್ ತಂಡದ ಚಾಲಕರು ಮ್ಯಾಕ್ಸ್ ವೆರ್ಸ್ಟಪ್ಪನ್ ಅವರ ಮೇಲೆ ಒತ್ತಡವನ್ನು ತರುವಲ್ಲಿ ವಿಫಲರಾದರು. ಮೊದಲಿನಿಂದ ಕೊನೆಯವರೆಗೂ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡು ಯಾವುದೇ ಪ್ರತಿರೋಧ ಕಾಣದ ಮ್ಯಾಕ್ಸ್ ವೆರ್ಸ್ಟಪ್ಪನ್ ಮೊದಲ ಸ್ಥಾನವನ್ನು ಗಳಿಸಿ ಸತತವಾಗಿ ನಾಲ್ಕನೆಯ ಬಾರಿ ಜಾಪನೀಸ್ ಗ್ರ್ಯಾನ್ ಪ್ರೀ ಕಿರೀಟವನ್ನು ತಮ್ಮ ಮುಡಿಗೇರಿಸಕೊಂಡರೆ, ಮೆಕ್ಲಾರೆನ್ ತಂಡದ ಲ್ಯಾಂಡೋ ನೊರಿಸ್ ಮತ್ತು ಆಸ್ಕರ್ ಪಿಯಾಸ್ಟ್ರಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಗಳಿಸಿದರು.
ಆರನೆಯ ಸ್ಥಾನವನ್ನು ಗಳಿಸಿದರೂ, ರೇಸಿನ ಫಾಸ್ಟೆಸ್ಟ್ ಲ್ಯಾಪ್ ಅನ್ನು ತಮ್ಮದಾಗಿಸಿಕೊಳ್ಳುವ ಮೂಲಕ, ಫಾಸ್ಟೆಸ್ಟ್ ಲ್ಯಾಪ್ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡ ಅತೀ ಕಿರಿಯ ಚಾಲಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಇನ್ನು ಇಸಾಕ್ ಹಡ್ಜರ್ ಅವರು ಫಾರ್ಮುಲಾ ಒನ್ ಅಲ್ಲಿ ತಮ್ಮ ಮೊದಲ ಅಂಕಗಳನ್ನು ಗಳಿಸಿ ಸಂತಸಪಟ್ಟರೆ, ಆಲಿವರ್ ಬೇರ್ಮನ್ ಅವರು ಹಾಸ್ ಕಾರಿನಲ್ಲಿ ಅಂಕಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.
ಫಲಿತಾಂಶ
೧. ಮ್ಯಾಕ್ಸ್ ವೆರ್ಸ್ಟಾಪನ್ (ರೆಡ್ ಬುಲ್ ರೇಸಿಂಗ್)
೨. ಲ್ಯಾಂಡೋ ನೊರಿಸ್ (ಮೆಕ್ಲಾರೆನ್)
೩. ಆಸ್ಕರ್ ಪಿಯಾಸ್ಟ್ರಿ (ಮೆಕ್ಲಾರೆನ್)
೪. ಚಾರ್ಲ್ಸ್ ಲೆಕ್ಲೆರ್ (ಫೆರಾರಿ)
೫. ಜಾರ್ಜ್ ರಸೆಲ್ (ಮರ್ಸಿಡಿಸ್)
೬. ಆಂಡ್ರಿಯಾ ಕಿಮಿ ಆಂಟೊನೇಲಿ (ಮರ್ಸಿಡಿಸ್)
೭. ಲೂಯಿಸ್ ಹ್ಯಾಮಿಲ್ಟನ್ (ಫೆರಾರಿ)
೮. ಇಸಾಕ್ ಹಡ್ಜರ್ (ರೇಸಿಂಗ್ ಬುಲ್ಸ್)
೯. ಅಲೆಕ್ಸ್ ಆಲ್ಬನ್ (ವಿಲಿಯಮ್ಸ್)
೧೦. ಆಲಿವರ್ ಬೇರ್ಮನ್ (ಹಾಸ್)
ಅಷ್ಟು ರೋಚಕತೆಯಿಂದ ಕೂಡಿಲ್ಲದ ಕಾರಣ ಈ ಓಟವು, ಸಾಮಾಜಿಕ ತಾಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿ, ಓವರ್ಟೇಕ್ ಮಾಡುವ ಅನುಕೂಲ ಇರದಂತಹ ಕಡೆ ರೇಸಿಂಗ್ ಮುಂದುವರೆಸಬೇಡಿ ಎಂಬ ಕೂಗು ಫಾರ್ಮುಲಾ ಒನ್ ಅಭಿಮಾನಿಗಳಿಂದ ಕಂಡುಬಂದಿತ್ತು. ಇಷ್ಟೆಲ್ಲಾ ಚರ್ಚೆಗಳ ನಡುವೆ ಒಬ್ಬ ವಿಶ್ವ ಚಾಮ್ಪಿಯನ್ ಚಾಲಕ ತಮ್ಮ ಕಾರನ್ನು ಹೇಗೆ ಓಡಿಸುತ್ತಾರೇ ಎಂಬುದನ್ನು ಮ್ಯಾಕ್ಸ್ ವೆರ್ಸ್ಟಪ್ಪನ್ ತೋರಿಸಿಕೊಟ್ಟರು.
ಇದೆಲ್ಲದರ ನಡುವೆ ತಮ್ಮ ತವರು ನೆಲದಲ್ಲಿ ಅಂಕಗಳನ್ನು ಪಡೆಯುವಲ್ಲಿ ಯೂಕಿ ಸುನೋಡ ಅವರು ವಿಫಲರಾದರೂ, ಓವರ್ಟೇಕ್ ಮಾಡಲು ಕಷ್ಟಕರವಾಗಿದ್ದ ಟ್ರ್ಯಾಕ್ ಅಲ್ಲಿ ಒಳ್ಳೆಯ ರೇಸಿಂಗ್ ಪೇಸ್ ತೋರಿಸುವ ಮೂಲಕ ರೆಡ್ಬುಲ್ ತಂಡದಲ್ಲಿ ಭರವಸೆ ಮೂಡಿಸಿದರು ಎಂದರೆ ತಪ್ಪಾಗಲಾರದು.
